ಬೀದಿಯಲ್ಲಿ ನೋಡಿದ್ದು ಒಂದೇ ಸಾವು
ಆ ಮನದಲ್ಲಿ ತುಂಬಿ ಮಡುಗಟ್ಟಿತು ನೋವು
ಪ್ರಶ್ನೆಗಳು ಉದ್ಬವಿಸಿದವು ಹಲವು ಹಲವು
ಜ್ಞಾನೋದಯದೆಡೆಗೆ ನಡೆಸಿದವು
ಒಂದೇ ದಿನ ಸಾಕಾಯಿತು
ಜಗದ ಸಂಕಷ್ಠವನು ಅಳೆದು ನೋಡಲು
ಒಂದೆ ಸಾವು ಸಾಕಾಯಿತು
ಸಿದ್ಧಾರ್ಥ ಬುದ್ಧನಾಗಲು
ದಿನವಿಡಿ ನೋಡುತಿಹೆವು ನಾವು
ಸಾಲು ಸಾಲುಗಳ ಸಾವು
ನಮ್ಮಲ್ಲಿ ಮಡುಗಟ್ಟಬಹುದೆ ನೋವು?
ಪ್ರಶ್ನೆಗಳೇಳುತಿಹವೆ ಹಲವು ಹಲವು?
ಜ್ಞಾನೋದಯ ಬುದ್ಧನಿಗೆ
ಜ್ಞಾನ ಜಗದಗಲಕೆ
ಸತ್ಯ ಅಂಹಿಂಸೆಗಳ ಕೊಡುಗೆ ಜಗಕೆ
ಬೂದುಗನ್ನಡಿಯಿಟ್ಟು ಹುಡುಕಿದರೂ ಸಿಗಬಹುದೆನಮ್ಮೊಳಗೆ!
ಎಲ್ಲಿದ್ದೇವೆ ನಾವು ನಾಗರೀಕತೆಯ ನೆಪದಲಿ?
ತಂತ್ರಜ್ಞಾನದ ಬೆಳಕಿನ ಕತ್ತಲಲ್ಲಿ
ಮೌಲ್ಯಗಳ ಮಾರಾಟ ಮಾಡುವ ವ್ಯವಹಾರಿಕತೆಯಲಿ
ಮಾನವೀಯತೆಯನ್ನು ಮುಚ್ಚಿಡುತ ಬಾಂಬುಗಳಲ್ಲಿ
ಎಲ್ಲಿದ್ದೇವೆ ನಾವು ? ಎಲ್ಲಿದ್ದೇವೆ ಎಲ್ಲಿದ್ದೇವೆ ?
No comments:
Post a Comment