ಆಪ್ತ ಸ್ನೇಹಿತರನ್ನು ಶೋಧಿಸಿ ನಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳುವುದು ಒಂದು ಕಲೆ. ಸ್ನೇಹಿತ ಬಳಗವನ್ನು ಹೊಂದುವುದರಿಂದ ಹೆಚ್ಚು ಕಾಲ ಜೀವಿಸುವರು, ಆರೋಗ್ಯವಾಗಿರುವರು ಎಂಬುದನ್ನು ಕೆಲವೊಂದು ಅಧ್ಯಯನಗಳು ಹೇಳುತ್ತವೆ. ಆದರೆ ಆಪ್ತ ಸ್ನೇಹಿತ ವರ್ಗವನ್ನು ಸಂಪಾದಿಸುವುದು ಬಹಳ ಕಷ್ಟದ ಕೆಲಸ. ಆಪ್ತ ಸ್ನೇಹದಲ್ಲಿ ಪ್ರಾಮಾಣಿಕತೆಯಿರಬೇಕು. ಪ್ರಾಮಾಣಿಕರನ್ನು ಈ ಜಗದಲ್ಲಿ ಹುಡುಕ ಹೊರಟರೆ ಮೊಟ್ಟ ಮೊದಲು ನಾನು ಪ್ರಾಮಾಣಿಕನಾಗಿರಬೇಕು. ನಾನು ಪ್ರಾಮಾಣಿಕನಾಗಿರದಿದ್ದರೆ ನನಗೆ ಮತ್ತೊಬ್ಬ ಪ್ರಾಮಾಣಿಕ ದೊರಕುವನೆ ? ನೀನು ಸುಳ್ಳು ಹೇಳಬಾರದು ಆಗ ಮಾತ್ರ ನಿನ್ನ ಸ್ನೇಹಿತನು ಸುಳ್ಳು ಹೇಳುವುದಿಲ್ಲ. ನೀವು ನಿಮ್ಮ ಸ್ನೇಹಿತನ ಎದುರು ನಾಟಕ ಮಾಡಬಾರದು ಆಗ ಮಾತ್ರ ನಿಮ್ಮ ಸ್ನೇಹಿತ ನಿಮ್ಮೆದುರಿಗೆ ನಾಟಕ ಮಾಡುವುದಿಲ್ಲ.
ಒಂದು ಅಧ್ಯಯನದ ಪ್ರಕಾರ ಮರಗಿಡಗಳ ಹತ್ತಿರ ಅವುಗಳನ್ನು ಕಡಿಯಲು ರಂಪ, ಕೊಡಲಿ ತೆಗೆದುಕೊಂಡು ಹೋದರೆ ಅವು ದುಃಖಿಸುತ್ತವಂತೆ ಹಾಗೂ ಒಂದು ರೀತಿಯ ದ್ರವ ಸೃಜಿಸುತ್ತವಂತೆ. ಈ ದ್ರವ ಅಳುವಿನ ಪ್ರತೀಕವಂತೆ. ಎಲ್ಲೋ ಓದಿದ ನೆನಪು...ಮಗು ಪ್ರತಿದಿನ ಎದುರಿನ ಕಾಡಿನಲ್ಲಿನ ಜಿಂಕೆಗಳ ಜೊತೆ ಆಟವಾಡುತ್ತಿರುತ್ತದಂತೆ. ಆಗ ಆ ಮಗುವಿನ ತಂದೆ ತಾಯಿಗಳು ಮಗುವನ್ನು ಕರೆದು ನೀನು ಒಂದು ಜಿಂಕೆಯನ್ನು ಮನೆಗೆ ಕರೆದು ತಾ ನಾವು ನಮ್ಮ ಮನೆಯ ಅತಿಥಿಗಳಿಗೆ ಮಾಂಸದ ಊಟ ಮಾಡಿ ಬಡಿಸೋಣ ಎಂದರಂತೆ. ಆಗ ಆ ಮಗು ಒಪ್ಪಲಿಲ್ಲವಂತೆ. ಆದರೆ ಪೋಷಕರು ನಿನಗೆ ನಮಗಿಂತಲೂ ಆ ಜಿಂಕೆ ಬೇಕೆ ? ಎಂದು ಮಗುವನ್ನು ಸಂಕಷ್ಟದಲ್ಲಿ ಸಿಲುಕಿಸಿದಾಗ ಮಗು ಒಲ್ಲದ ಮನಸ್ಸಿನಿಂದ ಜಿಂಕೆ ಕರೆತರಲು ಹೋಯಿತಂತೆ. ಆದರೆ ಜಿಂಕೆಗಳಿಗೆ ಮಗುವಿನ ಭಾವನೆ ಅರ್ಥವಾಗಿ ಎಂದಿನಂತೆ ಮಗುವಿನ ಹತ್ತಿರ ಬಾರಲಿಲ್ಲವಂತೆ ! ಈ ಮೇಲಿನ ಎರಡು ದೃಷ್ಟಾಂತಗಳನ್ನು ಓದಿದ ಮೇಲೆ ನನ್ನ ವ್ಯಕ್ತಿತ್ವದಲ್ಲಿ ಪ್ರಾಮಾಣಿಕನಾಗಿರಲು ಕಲಿತುಕೊಂಡೆ.
ಪ್ರಾಮಾಣಿಕರು
ಯಾರು ಎಂದು ಗುರುತಿಸುವುದು ಕಷ್ಟದ ಕೆಲಸ. ಎಲ್ಲರ ಮುಂದೆ ಪ್ರಾಮಾಣಿಕವಾಗಿಯೇ ನಡೆದುಕೊಂಡರೆ ನಿನ್ನನ್ನು ದುರುಪಯೋಗ ಪಡಿಸಿಕೊಳ್ಳುವರೆಂಬ ಪರಿಜ್ಞಾನವಿರಬೇಕು.
10 ವರ್ಷ ನಮ್ಮ ಮನೆಯಲ್ಲಿ ಪ್ರಾಮಾಣಿಕವಾಗಿದ್ದ ಕೆಲಸಗಾರ ಒಮ್ಮೆ 50 ಸಾವಿರ ರೂ. ಬ್ಯಾಂಕ್ನಿಂದ ತರಿಸಲು ಚೆಕ್ನೊಂದಿಗೆ
ಕಳುಹಿಸಿದಾಗ ತೆಗೆದುಕೊಂಡು ಪರಾರಿಯಾಗಿದ್ದ. ಪ್ರಾಮಾಣಿಕತೆ ಪರೀಕ್ಷಿಸಲು 10 ವರ್ಷವಾಗಲಿ, 50 ವರ್ಷವಾಗಲಿ ಮಾನದಂಡವಲ್ಲ.
ನನ್ನನ್ನು ನಂಬಿ 50 ಕೋಟಿ ಸಾಲ ಕೊಡುವವರಿದ್ದಾರೆ. ಮಧ್ಯರಾತ್ರೀಲಿ ಕರೆದರೆ ಬರುವವರಿದ್ದಾರೆ, ಹೊಟ್ಟೆ ತುಂಬ ಎಣ್ಣೆ ಹೊಡೆಸಿ ಬಿಲ್ ಕೊಡುವವರಿದ್ದಾರೆ, ಹೀಗೆ ಹಲವಾರು ಉದಾಹರಣೆಗಳನ್ನು ಸ್ನೇಹದ ವಿಚಾರದಲ್ಲಿ ನಾವು ಕೊಡಬಹುದು. ಒಮ್ಮೆ ಪರೀಕ್ಷಿಸಿ.
50 ಕೋಟಿಯ ಬದಲು ನಿಮ್ಮ ಸ್ನೇಹಿತರಲ್ಲಿ ಒಮ್ಮೆ ಭಿಕ್ಷೆ ಬೇಡಿ. ನಾನು ವ್ಯವಹಾರದಲ್ಲಿ ಸೋತಿದ್ದೇನೆ. ಬ್ಯಾಂಕಿನಿಂದ ಮನೆ ಹರಾಜಿಗೆ ಬಂದಿದೆ. ಸಾಲ ತೀರಿಸಲು ಆಗುತ್ತಿಲ್ಲ. ನಿನ್ನ ಕೈಲಾದಷ್ಟು ಸಹಾಯ ಮಾಡಿ. ನಾನು ಸಾಲವನ್ನು ಹಿಂತಿರುಗಿಸಬಹುದು ಅಥವಾ ಅಕಸ್ಮಾತ್ ಹಿಂದಿರುಗಿಸಲು ಸಾಧ್ಯವಾಗದಿದ್ದರೆ ದಾನ ಎಂದು ತಿಳಿದು ಸಹಾಯ ಮಾಡಿ ಎಂದು ನಿವೇದಿಸಿಕೊಳ್ಳಿ. ಹೀಗೆ ನಿವೇದಿಸಲು ನಿಮ್ಮ ಅಹಂ ಅಡ್ಡ ಬರುತ್ತೆ, ನಿಮ್ಮ ಮರ್ಯಾದೆ ಹೋಗುತ್ತದೆ ಎಂಬ ಭಯ, ಪರವಾಗಿಲ್ಲ. ನೀವು ನಂಬಿದ 10 ಜನರನ್ನು ಹೀಗೆ ಕೇಳಿ. 10 ಜನರ ಎದುರು ನಿಮ್ಮ ಮರ್ಯಾದೆ ಹೋದರೂ ಸಹ ಪರವಾಗಿಲ್ಲ. 1 ಒಳ್ಳೆ ಸ್ನೇಹಿತ ಸಿಗಬಹುದು. ಒಬ್ಬ ಒಳ್ಳೆ ಸ್ನೇಹಿತನಿಗಾಗಿ 9 ಜನ ನಿಮ್ಮಿಂದ ದೂರಾಗಬಹುದು. 9 ಜನ ಅನವಶ್ಯಕ (ಕಸ) ನಿಮ್ಮಿಂದ ದೂರಾದಾಗ ನಿಮ್ಮ ಸಮಯ ಕಿತ್ತುಕೊಳ್ಳುತ್ತಿದ್ದ ಕಳ್ಳರು ದೂರಾಗುತ್ತಾರೆ. ನಿಮ್ಮ ಅತ್ಯಮೂಲ್ಯ ಸಮಯ ಉಳಿಯುತ್ತದೆ. ಕೇಳಿದಾಗ ಹಣ ನೀಡಿದರೆ ಮಾತ್ರ ಒಳ್ಳೆ ಸ್ನೇಹಿತರೆ? ಆಗಾದಾಗ ಅದು ತಪ್ಪಲ್ಲವೆ ಎಂದೆನಿಸಬಹುದು. ಆದರೆ ಸ್ನೇಹಿತನಾಗಿ ತುಂಬಾ ಕಷ್ಟದಲ್ಲಿರುವವನನ್ನು ನೀವು ಸಹಾಯ ಕೇಳಲು ಆಯ್ಕೆ ಮಾಡಿಕೊಳ್ಳಬೇಡಿ. ನಿಮ್ಮ ಸ್ನೇಹಿತನ ಹತ್ತಿರ ಸಹಾಯ ಮಾಡಲು ಇರುವ ಅರ್ಹತೆ ಪರಿಗಣಿಸಿ ಸಹಾಯ ಬೇಡಲು ಮುಂದಾಗಿ. ಕೆಲವೊಮ್ಮೆ ನಾನು ನನ್ನ ಸ್ನೇಹಿತರಿಗೆ ಬೇಕೆಂತಲೆ ಈ ರೀತಿ ಸಹಾಯ ಕೇಳಿದಾಗ ಹಲವಾರು ಪಾಠ ಕಲಿತ ಉದಾಹರಣೆಗಳಿವೆ. ನೀವು ಈ ಅನುಭವ ಪಡೆದುಕೊಳ್ಳಿ.
ಕೆಲವೊಮ್ಮೆ ಬೇಕೆಂತಲೆ ನಿಮ್ಮ ಪ್ರಾಮಾಣಿಕ ಸ್ನೇಹಿತರು ಹಣ ಕೇಳಿದಾಗ ಕೇಳಿದ ಹಣಕ್ಕಿಂತಲೂ 5000 ರೂ. ಅಧಿಕ ಹಣ ನೀಡಿ ಉದಾಹರಣೆಗೆ 50 ಸಾವಿರ ಕೇಳಿದರೆ 55 ಸಾವಿರ ನೀಡಿ ಮತ್ತೆ ನಿಮ್ಮ ಸ್ನೇಹಿತ ನಾವು ನೀಡಿದ ಹಣ ಹೆಚ್ಚಿದೆ ಎಂದು ವಾಪಸ್ಸು ನೀಡುವನೆ ಎಂದು ಪರೀಕ್ಷಿಸಿ. ಈ ರೀತಿ ಹಲವು ಚಿಕ್ಕ ಚಿಕ್ಕ ವಿಷಯಗಳಲ್ಲಿ ನಿಮ್ಮ ಪ್ರಾಮಾಣಿಕ ಸ್ನೇಹಿತರನ್ನು ಹೋರೆಗೆ ಹಚ್ಚಬಹುದು. ಅಕಸ್ಮಾತ್ ನಿಮ್ಮ ಸ್ನೇಹಿತ ನಾವು ನೀಡಿದ ಹಣವನ್ನು ಎಣಿಸದೆ ಬೇರೆಯವರಿಗೆ ಅಥವಾ ಮತ್ತೊಬ್ಬ ಸ್ನೇಹಿತನಿಗೆ ನಂಬಿ ನೀಡಿರಲೂಬಹುದು ಅಥವಾ ಎಣಿಸದೆ ಹಾಗೆಯೇ ಖರ್ಚು ಮಾಡಿರಲುಬಹುದು. ಈ ಒಂದು ವಿಧಾನದಿಂದಲೇ ಪ್ರಾಮಾಣಿಕತೆಯನ್ನು ಪರೀಕ್ಷಿಸಲು ಸಾಧ್ಯವಿಲ್ಲ. ನಿಮಗೆ ತಿಳಿದ ವಿಧಾನಗಳನ್ನು ಬಳಸಿ ಮೌಲ್ಯಮಾಪನ ಮಾಡಬಹುದು.
ಮುಂದುವರೆಯುವುದು...............................
No comments:
Post a Comment